Saturday, June 7, 2008

ಬಿಸಿಲ ಹಣ್ಣು

ಮೂರಲ್ಲ ನೂರಲ್ಲ

ಮುನ್ನೂರು ಜೊತೆ ಕಣ್ಣು

ನೆಟ್ಟಿದ್ದು ಮಾತ್ರ ಎರಡು ಜೊತೆ

ನೆರಿಗೆ ಕೆನ್ನೆ, ಮುದುಡಿದ ಮೈ

ಥೇಟ್ ಚಂಪಕ್ಕಜ್ಜಿ ಹಾಗೇ...

ಆ ದಡಿಸೆರಗಿನ ಅಡಿಗೊಮ್ಮೆ ಮೂಗರಳಿಸುವಾ?

ತೇಲಿತೇನೋ ಅರಳಿಟ್ಟು, ಮೆಂತೆಹಿಟ್ಟಿನ ಘಮಲು

ಓಹ್ ಹಳದಿ ಪೇಟಾ?

ಎಷ್ಟು ದಿನವಾಯಿತಲ್ಲವೇ- ತಂಬಾಕಿನ ಪರಿಮಳ

ಬೀಡಿ ಕಟ್ಟುವ ಮೋಡ ನೋಡಿ

ಜೊತೆಗೆ ಬೆವರ ಸಾಲುಗಳ. . .

ಏನೇ ಹೇಳಿ, ಕರಿಬೂಟಿನ ಮಧ್ಯೆಯೂ

ಆ ದೂಲ್ಗಾಳಿನ ಗತ್ತೇ ಗತ್ತು.

ಅಂಗಿಗಂಟಿದ ಕವಳದ ಕಲೆ

ಉಸಿರಿಗಂಟಿದ

ಕಮಟು ಸೆರಗೇ ಅಚ್ಚು-ಮೆಚ್ಚು

-ಶ್ರೀದೇವಿ ಕಳಸದ

ಬಂಗಾರ ಬೆಳಕು ಮತ್ತು ಒಲೆಯೊಡತಿ

ಗುಡಿಸಲಿಗೆ ಹೊಚ್ಚಿದ್ದ ತಗಡಿನಿಂದ ತಟ ತಟ ನೀರು... ಬಿಳಿ ಜರ್ಮನಿ ಪ್ಲೇಟಿನ ತುಂಬ ಬಂಗಾರ ಬಣ್ಣ. ಏದುಸಿರಿನ ಮಳೆಗೆ ನೆಲ್ಲಕ್ಕಿ ತೂತು. ಉಬ್ಬಿ ನಿಂತ ಸೆಗಣಿ ಹಕಳೆಗೆ ಯಾವ ದೇಶದ್ದೋ ರೂಪು. ಆ ರೂಪಿಗೂ ಆ ತೂತಿಗೂ ಅದೇನ್ಥದ್ದೂ ಸಂಬಂಧ. ಸುತ್ತಲೆಲ್ಲ ಪರಿಮಳ ಅದರಿಂದಲೇ. ಇಳೆಯ ಒಡಲಿನಿಂದ ಇಣುಕಿದ ಕೆಂಪು ಜಲ್ಲಿಗೆ, ಮಳೆಗೆ ತೋಯ್ದು ಮಡಿಯಾದೆನೆಂಬ ಸಮಾಧಾನ. ಒಲೆ ಮಾಡಿನ ಒಡತಿಗೋ ಒಳಗೊಳಗೆ ತೋಯ್ದ ಅನುಭವ, ಬಿಸಿ ಹೆಂಚು ಎದುರಿಗಿದ್ದರೂ...ಬಂಗಾರ ಹನಿ ಉದುರಿ, ಕಾವಲಿ ಚುರುಗುಟ್ಟಿದಾಗಲೇ ಮತ್ತೆ ಎಚ್ಚರ ಆಕೆಗೆ.

ಕಟ್ಟಿಗೆಯೇನೋ ತೋಯ್ದು ತೆಪ್ಪಗಾಗುತ್ತಿತ್ತು. ಅದರ ‘ತಾಪ’ ಮಾತ್ರ ಅದೇ ಒಲೆಯೊಡತಿಗೆ... ಬೂಸರು ಹಿಡಿದ ಬೀಡಿ ನಗಿಸಲು ಮೀಸೆಯೊಡೆಯನ ಒದ್ದಾಟ. ಕಣ್ ಕಿರಿದು ಮಾಡಿ ನಗತೊಡಗಿತು ಹೊರಸಿಗೆ ಬಿಗಿದ ಪುಂಡಿನಾರು : ತನ್ನ ಕಟ್ಟಿಗೆಗೆ ಬಿಗಿದದ್ದು ಈ ಕೈಗಳೇ ತಾನೆ? ಎಂದು. ಆದರೂ ಒಳಗೊಳಗೆ ಖುಷಿ, ಬೇರು ಕಿತ್ತು, ಹಗ್ಗ ಹೊಸೆದು, ಹೀಗೆ ಕಟ್ಟಿಗೆಗೆ ಬಿಗಿದಾತನ ಪರಿಪಾಡಲು ನೋಡಿ. ಒಂದಿರುಳು, ಒಂದು ಹಗಲು ಮಾತ್ರ ಕಳೆದಿದೆ ಒಡಲಿನಿಂದ ಮಡಿಲಿಗೆ ಜಾರಿ. ಅಪ್ಪನಂತೆ ಕಪ್ಪಗಿದ್ದರೂ ಅವ್ವನ ತಾಳಿ ನೊಂದುಕೊಳ್ಳುವಷ್ಟು ಬಂಗಾರ ಬೆಳಕು. ಒಲೆಯೊಡತಿಗೋ ಅರೆಬಿಸಿ ಎಣ್ಣೆಯನ್ನೇ ಅಳ್ಳೆತ್ತಿಗೊತ್ತಿ ತಟ್ಟಿ ವಂಶಕುಡಿ ಮಲಗಿಸಿದ ಸಂತಸ. ಎದೆಹಗುರು ಮಾಡಿದ ಕಂದನೊಮ್ಮೆ ನೋಡಿ ನಿದ್ದೆಗೆ ಜಾರುವ ತವಕ ಹೆತ್ತೊಡಲಿಗೆ...

ಮತ್ತೆ ಅದೇ ಏದುಸಿರಿನ ಮಳೆ...

ಇನ್ನೆರಡು ತಾಸು ಕಳೆದರೆ ಬಂಗಾರ ಕಿರಣಗಳೊಡೆಯನ ಆಗಮನ. ಗೊರಕೆಗೆ ಆಗಾಗ ಬೆದರುವ ಮೀಸೆಗುಚ್ಛ. ನ್ಯಾಗೊಂದಿ ಸಂದಿ ಅಪ್ಪಿದ ಬೀಡಿಗೂ, ಒಲೆಯ ತಲೆಯೇರಿದ ಊದುಗೊಳವಿಗೂ ಸಕ್ಕರೆ ನಿದ್ರೆ. ಹೊಗೆಗಪ್ಪು ಅಡರಿದ ಗೋಡೆ ಮೇಲೆ ಧ್ಯಾನಸ್ಥ ಹಲ್ಲಿ. ಕೊಂಚ ಮೈಮರೆತರೆ, ಹಾರೀತು ಪ್ರಾಣಪಕ್ಷಿ ಎಂಬ ನಡುಕದಲ್ಲೇ ರೆಕ್ಕೆ ಹುಳು. . .ಎದೆಕಾವಿಗೆ ಮೊಗಮಾಡಿದ ತುಂಬುಗಣ್ಣಿನ ಕೂಸು. ಪುಂಡಿನಾರಿಗೆ ಮೈಭಾರ ಹೊರಿಸಿದ ಅಮ್ಮ, ಅಗ್ಗಿಷ್ಠಿಗೆ ಮಗ್ಗುಲಿಗೆ ಆ ಅಮ್ಮನ ಅಮ್ಮ ಅದೇ ಆss ಒಲೆಯೊಡತಿ... ಅಪ್ಪಿದ ರೆಪ್ಪೆ ನುಸುಳಿ ಹರಿಯುತ್ತಿದ್ದವು ಕಣ್ಣ ಹನಿಗಳು, ಆ ಹನಿಗಳಿಗೆ ಸಾಥ್ ನೀಡುತ್ತಿದ್ದವು ಜಂತಿಯ ಸಾರವನ್ನೆಲ್ಲ ಹೀರಿ, ಬಂಗಾರದುಡುಗೆ ತೊಟ್ಟ ಹನಿಗಳು. ಆ ಹನಿಯ ಹಸಿಯಲ್ಲೇ, ಹೊದ್ದು ಮಲಗಿದವರೆಲ್ಲ ಅದಾಗಲೇ ಕದ್ದಾಗಿತ್ತು ಹೊನ್ನ ಕನಸು.

ಆದರೆ.... ಈ ಮನೆ ಹೊಸ್ತಿಲು ತುಳಿದು ಮೂವತ್ತು ದೀಪಾವಳಿ, ಯುಗಾದಿ ಹೀಗೆ ಏನೆಲ್ಲ ಕಳೆದವು ಜೊತೆಗೆ ಅಕ್ಷತೃತಿಯಾ. ಹೌದು. ಈ ಸಲವೂ ಹೀಗೆ ಬಂದು ಹಾಗೇ ಹೋಯಿತು ಅಕ್ಷತೃತಿಯಾ...ಆಗಾಗ ಹೇಳುತ್ತಿದ್ದ ಅವ್ವನ ಧ್ವನಿ ಒಲೆಯೊಡತಿಯ ಮುರುಕು ಬೆಂಡೋಲೆ ಪಕ್ಕದಿಂದ ಹಾಯ್ದು ಹೋಯಿತು. ‘ಈವತ್ತಿನ ದಿನ ಒಂದು ಗುಂಜಿನಾದ್ರೂ ಬಂಗಾರ ತಗೊಂಡ್ರೆ ಒಳ್ಳೆಯದು. ಅಷ್ಟೇ ಅಲ್ಲ ದುಪ್ಪಟ್ಟೂ ಆಗತ್ತೆ. ಹಾಗಂತsss ನಮ್ಮ ಅಮ್ಮ ಹೇಳ್ತಿದ್ರು. ನಾನಂತೂ ಕಾಣ್ಲಿಲ್ಲ, ನೀನಾದ್ರೂ...’ ಅಮ್ಮ ಬಿಟ್ಟು, ಕೊಟ್ಟು ಹೋದ ಆಸ್ತಿಯೆಂದರೆ ಇದೊಂದೇ.

ಆದರೆ...

ದಿನಸರಿದಂತೆ ತಪ್ಪಲೇ ಇಲ್ಲ ಗಂಜಿಗೆ ಗುದ್ದಾಟ. ವರ್ಷ ಕಳೆದಷ್ಟೂ ಮಳೆಯ ಕಾಟ. ಆ ಮಳೆಗೊಂದರಂತೆ ಬಸುರು-ಬಾಣಂತನ, ಆಳವಿ ಪಾಯಸಕ್ಕೆ ಕಟ್ಟಿಗೆ ಹೊಂಚಾಟ. ಅಂಟಿನುಂಡಿಗೆ ಕೊಬ್ಬರಿ ಕುಟ್ಟಾಟ. ಮತ್ತದೇ ಅಳು, ಮತ್ತದೇ ನಗು, ಮತ್ತದೇ ಬೆಳಕು, ಮತ್ತದೇ ಕತ್ತಲು, ನಡುನಡುವೆ ಬಂಗಾರಬೆಳಕು. . . .ಕನಸ ಹೂಡಲು, ನನಸ ಮಾಡಲು. ಬದುಕ ಬಂಡಿ ದೂಡಲು...

-ಶ್ರೀದೇವಿ ಕಳಸದ

(ಈ ಕಥೆ ಕೆಂಡಸಂಪಿಗೆ.ಕಾಮ್ ನಲ್ಲಿ ‘ಅಕ್ಷತೃತಿಯಾ’ ಎಂಬ ತಲೆಬರಹದಡಿ ಪ್ರಕಟವಾಗಿದೆ)

ಕುಂಚ ಗೋಧೂಳಿ

ಹೊತ್ತದು ಗೋಧೂಳಿ
ಹುಡಿಮಣ್ಣು ಅಮರಿ
ಬಿಸಿಲ ಕೋಲ ಕರಗಿ,
ನವಿಲ ನಲಿವ ಸಮಯ

ಅದ್ಯಾವ ಗಳಿಗೆಯೋ
ಹಸಿ ಜಾರಿತು ಅರಿಶಿಣ
ಸವರಿದ ಚಂದನ...

ಕಣ್ಣಂಚಿಗಿಲ್ಲ ಮಿಂಚು
ತೀಡಿದರೂ
ಕಾಡಿಗೆ.
ತುಸ ಸಪ್ಪೆಯೇ ತುಟಿ
ಜೇನ ಸವರಿ
ಕೆಂಗುಲಾಬಿ
ಸೋಕಿಸಿದರೂ.

ತುಸು ಹೆಚ್ಚಾಯಿತೇ?
ಎನ್ನುತ್ತ ಹಚ್ಚಿದ
ರಂಗೂ ತಂದಿಲ್ಲ
ಮೆರಗು ಕೆನ್ನೆಗೆ.
ಮುತ್ತಲ್ಲ, ಹವಳಲ್ಲ
ವಜ್ರದಾ ತುಣಕೊಂದ
ಗಿಣಿಮೂಗಿಗಿಟ್ಟರೂ
ಹೊಳಪಿಲ್ಲ ಅದಕೆ.
ಕಳೆಯಿಲ್ಲ ಮೊಗಕೆ.

ಅಲ್ಲೊಬ್ಬ ಬಂದ.
ಗುಬ್ಬಚ್ಚಿ ಗೂಡಿಗೂ
ಬಾವಲಿಗಳ ಜೋಕಾಲಿಗೂ
ಹದವಾಗಿತ್ತು ತಲೆ
ಹಿತವಾಗಿತ್ತು ಗಡ್ಡ.
ಅಂದೆಂದೋ ತೊಟ್ಟಿದ್ದ
ಅಂಗಿಗೂ, ಹೆಗಲಿಗಂಟಿದ ಚೀಲಕ್ಕೂ
ಬೇಸರಿಸಿತ್ತು ಅವನ ಸಂಗ.

ಅವಳ ನೋಡಿದ ಅವನಲ್ಲಿ
ಅದೆಂಥದ್ದೋ
'ಸಂಚಲನ'
ಒಣಗಿದ ಬಣ್ಣ
ಅಂಟಿದ ಕುಂಚಕೂ ಕೂಡ.
ಅವಳನೊಸಲಿಗಿಟ್ಟ ಬೊಟ್ಟ.
ಅವಳಿಗರಿವಿಲ್ಲದ, ಅವಳೊಳಗಿನ
ಹೆಣ್ತನ ದಟ್ಟ ದಿಟ್ಟ.
ಅದರೊಂದಿಗೆ ಹೊರಬಂದ
ಅವನಲ್ಲಿನ ಕಲೆಗಾರ...

-ಶ್ರೀದೇವಿ ಕಳಸದ

(ಕೆಂಡಸಂಪಿಗೆಯ ‘ದಿನದ ಕವಿ’ಯ ಮೊದಲ ಕವನ ಇದು. )

http://www.kendasampige.com/article.php?id=783

ಎಸ್‌ಪಿಬಿ - ೬೨, ಬಾಲೂ ಸಾರ್‍‌ಗೊಂದು ಪತ್ರ

ಗಾನ ವಿದ್ಯಾ ಬಡೀ ಕಠಿಣ ಹೈ?
ಬಾಲೂ ಸರ್‍ ನನ್ನ ಈ ಪ್ರಶ್ನೆಗೆ ನೀವಿಂದು ಉತ್ತರ ಹೇಳಲೇಬೇಕು. ಗದಗಿನ ಪುಟ್ಟರಾಜ ಗವಾಯಿಗಳು ರಚಿಸಿ, ಜೀವನಪುರಿ ರಾಗದಲ್ಲಿ ಬಂಧಿಸಿದ ಈ ಬಂದಿಶ್ ನನಗೆ ಸುಮಾರು ಹನ್ನೆರಡು ವರ್ಷಗಳಿಂದ ಕಾಡುತ್ತಲೇ ಇದೆ. ಆ ಕಾಡುವಿಕೆಯಲ್ಲೇ ಹಲವಾರು ಪ್ರಶ್ನೆ, ಉತ್ತರ, ನೋವು, ಕುತೂಹಲ, ಆಶ್ಚರ್ಯ, ಅದ್ಭುತ ಹೀಗೆ ಏನೆಲ್ಲ ಮಿಳಿತಗೊಂಡಿವೆ...

***

ಎಲ್ಲಿಂದಲೋ ತೇಲಿ ಬಂದ ಒಂದು ರಾಗದ ಅಲೆ.... ದುಂಡು ಮಲ್ಲಿಗೆ ಮೊಗ್ಗು ಬಿಡಿಸುವಾಗ, ಅದರ ರಾಗವಿಸ್ತಾರದ್ದೇ ನೆನಪು... ಗಿರಗಿರನೆ ತಿರುಗುವ ಫ್ಯಾನಿನ ಏಕನಾದವನ್ನೋ, ದೂರದಿ ಕೇಳುವ ರೈಲಿನ ಕೂಗನ್ನೋ, ಗೋಧಿ ಬೀಸಿಕೊಂಡು ಬರಲು ಅಮ್ಮ ಕಳುಹಿಸಿದ ಗಿರಣಿ ಯಂತ್ರದ ಶಬ್ದದಲ್ಲೋ, ಅಪ್ಪನಿಗೆ ಕಿರಿಕಿರಿಯೆನಿಸಿದರೂ ಭಾನುವಾರದ ದೋಸೆಗಾಗಿ ಪಟ್ಟುಬಿಡದೇ ಒಂದೇ ಸಮನೆ ಸದ್ದು ಮಾಡುವ ಮಿಕ್ಸಿ ಶೃತಿಯೊಂದಿಗೋ..... ಕಾಡುವ ಆ ರಾಗದ ಅವರೋಹ ಆರೋಹವನ್ನು ಗುನುಗುನಿಸುವ ಖಯಾಲಿ. ಅದು ಹರಿಸುವ ಖುಷಿಯಲ್ಲೇ ಗುರುಗಳ ಮನೆಗೆ ಹೋದಾಗ, 'ಒಂದು ರಾಗವನ್ನ ಹತ್ತತ್ತು ವರ್ಷ ಅಭ್ಯಾಸ ಮಾಡಿಸುತ್ತಿದ್ದರು ನಮ್ಮ ಗುರುಗಳು!' ಎಂದು ಆಲಾಪಿಸುವ ಅವರ ತತ್ವಕ್ಕೆ, ಮನದ ಮಾತು ಮೌನದಲ್ಲೇ ತಿಹಾಯಿ ಹೇಳತೊಡಗುತ್ತಿತ್ತು.'ಅಪರಾತ್ರಿ ಎಬ್ಬಿಸಿ, ಮಾಲಕಂಸದ ಸಮಯವಲ್ಲವೇ ಇದು? ತಂಬೂರಿ ಶ್ರುತಿ ಮಾಡಿ ಎಂದು ಹೇಳುವ ನಮ್ಮ ಗುರುಗಳ ಲಹರಿಗಾಗಿ ನಾವು ಎಷ್ಟು ವರ್ಷ ಕಾಯ್ದಿಲ್ಲ? ಕೇವಲ ಒಂದು ರಾಗದ ಕಲಿಕೆಗಾಗಿ ಜಾಗರಣೆ ಮಾಡಿದ ರಾತ್ರಿಗಳೆಷ್ಟೋ!' ಎಂದು ಆಗಾಗ ಕವಳ ತುಂಬಿದ ಬಾಯಿಯಿಂದ ಗುರುಗಳು ತಾನಿಸಿದಾಗ, ಸಂಧ್ಯಾಸಮಯದ ಶೃಂಗಾರ ರಾಗ 'ಯಮನ್' ಮನದಲ್ಲಿ ನಲಿದಾಡುತ್ತಿದ್ದರೂ ಬೆಳಗಿನ ಭೈರವವನ್ನೇ ಗಂಭೀರವಾಗಿ ಹಾಡಲು ಮನಸ್ಸು ತಯಾರಾಗುತ್ತಿತ್ತು.

***

'ಒಂದಲ್ಲ ಎರಡಲ್ಲ ಐದ್ಹತ್ತು ವರ್ಷ ಗುರುಗಳ ಬಟ್ಟೆ ಒಗೆದು, ಪಾತ್ರೆ ತೊಳೆದು, ಕಸ ಗುಡಿಸಿದ್ದಕ್ಕೇ ಇಂದು ಈ ಸ್ಥಾನ. ದಿನಗಟ್ಟಲೇ ಒಂಟಿಗಾಲಿನಲ್ಲಿ ನಿಂತು ಗುರುಗಳಿಗೆ ಗೌರವ-ವಿನಯ ಸಲ್ಲಿಸಿದ್ದರ ಫಲವೇ ನಮ್ಮನ್ನಿವತ್ತು ಹೀಗೆ ಭದ್ರವಾಗಿ ನಿಲ್ಲಿಸಿರುವುದು'. ಗುರುಗಳ ರಾಗವಿಸ್ತಾರ ಹೀಗೆ ಕ್ರಮಿಸುತ್ತಿರುವಾಗ, ಅಷ್ಟು ದೂರದೂರಿನಿಂದ ಪ್ರಯಾಣಸಿದ ಕೇವಲ ಎಂಟ್ಹತ್ತು ವರ್ಷದ ಪುಟ್ಟ ಮನಸ್ಸಿನ ಗಂಟಲು ಆರಿ ಅಂಟಿಕೊಳ್ಳುತ್ತಿದ್ದರೂ 'ಒಂದು ಗ್ಲಾಸು ನೀರು ಬೇಕಿತ್ತು' ಎಂದು ಹೇಳಿದರೂ ಅದು ಮಂದ್ರಸಪ್ತಕದ ಕೆಳಗೆ ಜಾರಿ ಹೋಗುತ್ತಿತ್ತು....

***

'ಇಪ್ಪತ್ತಿಪ್ಪತ್ತು ವರ್ಷ ಗುರು ಸೇವೆಗೈದು, ಗುರುಗಳ ಅಪ್ಪಣೆಯಾದಾಗಲೇ ವೇದಿಕೆಯೇರುವ ಅಪೂರ್ವ ಸಮಯ. ಆ ಒಂದೇ ಒಂದು ಘಳಿಗೆಗಾಗಿ ನಾವು ಮಾಡಿದ್ದು ಒಂದು ರೀತಿ ತಪಸ್ಸೇ ಸರಿ ' ಎಂದು ಆಗಾಗ ಷಡ್ಜ್ ದ ಮೇಲೆ ಓಂಕಾರ, ಹ್ರೀಂಕಾರ ನಾದ ಹೊಮ್ಮಿಸುವ ಗುರುವರ್ಯರ ಎದುರಿಗೆ, 'ನಿನ್ನೆ ಹಾಡಿದ ಭೈರವಿಯ ತರಾನಾಕ್ಕೆ ಸಾವಿರಾರು ಚಪ್ಪಾಳೆ ಗಿಟ್ಟಿಸಿಕೊಂಡದ್ದು ಹೇಳು ಹೇಳು....' ಎಂದು ಮನಸ್ಸು ಒತ್ತಾಯಿಸಿದರೂ ನಾಭಿಯಿಂದ ಹೊರಡುವ ಶಬ್ದ ಪುನಃ ಆಲ್ಲೇ ವಿರಮಿಸುತ್ತಿತ್ತು.

****

ಬಾಲು ಸರ್‍, ಅದ್ಯಾಕೋ ನನ್ನ ಮನಸ್ಸಿಗೆ ಇದನ್ನೆಲ್ಲ ಈವತ್ತು ನಿಮ್ಮ ಮುಂದೆ ಹೇಳಿಕೊಳ್ಳಬೇಕೆನ್ನಿಸಿತು. ಏಕೆಂದರೆ, ನೀವೂ ಇಂತಹ ಪರಿಸ್ಥಿತಿಯನ್ನು ಎದುರಿಸಿ ಬಂದವರಲ್ಲವಾ? ಹೇಗೆ ಬೆಳೆದಿರಿ ಬಾಲು ಸರ್‌? ಇಂಥದನ್ನೆಲ್ಲ ಅನುಭವಿಸಿಯೂ, ಎಳೆಯರ ಮುಂದೆ ಅದ್ಹೇಗೆ ದೊಡ್ಡ ಗುರುವಾಗಿ ನಿಂತಿರಿ? ಯಾವ ವಿನಯ ನಿಮ್ಮ ದೊಡ್ಡ ಕಾಯದಲ್ಲಿ ಈ ಪರಿಯ ವಿನಯ ತುಂಬಿತು? ಅದ್ಹೇಗೆ ನೀವು ಎಳೆಯರ ತಲ್ಲಣವನ್ನು ಫ್ರೆಶ್‌ ಆಗಿ ಅನುಭವಿಸುತ್ತೀರಿ? ಅವರ ನೋವನ್ನು, ನಲಿವನ್ನು, ಪ್ರಯತ್ನ ಪಡುವ ಪರಿಯನ್ನು ಅದೆಂಥ ತೀವ್ರತೆಯಿಂದ ಆಸ್ವಾದಿಸುತ್ತೀರಿ? ಒಬ್ಬ ಗಾಯಕ ಚೆನ್ನಾಗಿ ಹಾಡುವುದರಿಂದ ಬೆಳೆಯುತ್ತಾನಾ? ಅಥವಾ ಚೆನ್ನಾಗಿ ಹಾಡುವವರನ್ನು ಬೆಳೆಸುವ ಮೂಲಕವಾ? ನೀವೇ ಉತ್ತರಿಸಬೇಕು ಬಾಲು ಸರ್‌.ಈ ಪ್ರಶ್ನೆಗೆ ಉತ್ತರ ನಿಮ್ಮಿಂದ ಮಾತ್ರ ನಿರೀಕ್ಷಿಸುತ್ತಿರುವುದಕ್ಕೆ ನಿಮ್ಮ ಅಪೂರ್ವ ವ್ಯಕ್ತಿತ್ವವೇ ಕಾರಣ...
-ಶ್ರೀದೇವಿ ಕಳಸದ
(ಎಸ್‌ಪಿಬಿ - ೬೨, ಬಾಲೂ ಸಾರ್‌ಗೊಂದು ಪತ್ರ ಎಂಬ ಶೀರ್ಷಿಕೆಯಡಿ ‘ಕೆಂಡಸಂಪಿಗೆ’ಯಲ್ಲಿ ಪ್ರಕಟವಾಗಿದೆ)
http://kendasampige.com/article.php?id=798