Saturday, June 7, 2008

ಬಿಸಿಲ ಹಣ್ಣು

ಮೂರಲ್ಲ ನೂರಲ್ಲ

ಮುನ್ನೂರು ಜೊತೆ ಕಣ್ಣು

ನೆಟ್ಟಿದ್ದು ಮಾತ್ರ ಎರಡು ಜೊತೆ

ನೆರಿಗೆ ಕೆನ್ನೆ, ಮುದುಡಿದ ಮೈ

ಥೇಟ್ ಚಂಪಕ್ಕಜ್ಜಿ ಹಾಗೇ...

ಆ ದಡಿಸೆರಗಿನ ಅಡಿಗೊಮ್ಮೆ ಮೂಗರಳಿಸುವಾ?

ತೇಲಿತೇನೋ ಅರಳಿಟ್ಟು, ಮೆಂತೆಹಿಟ್ಟಿನ ಘಮಲು

ಓಹ್ ಹಳದಿ ಪೇಟಾ?

ಎಷ್ಟು ದಿನವಾಯಿತಲ್ಲವೇ- ತಂಬಾಕಿನ ಪರಿಮಳ

ಬೀಡಿ ಕಟ್ಟುವ ಮೋಡ ನೋಡಿ

ಜೊತೆಗೆ ಬೆವರ ಸಾಲುಗಳ. . .

ಏನೇ ಹೇಳಿ, ಕರಿಬೂಟಿನ ಮಧ್ಯೆಯೂ

ಆ ದೂಲ್ಗಾಳಿನ ಗತ್ತೇ ಗತ್ತು.

ಅಂಗಿಗಂಟಿದ ಕವಳದ ಕಲೆ

ಉಸಿರಿಗಂಟಿದ

ಕಮಟು ಸೆರಗೇ ಅಚ್ಚು-ಮೆಚ್ಚು

-ಶ್ರೀದೇವಿ ಕಳಸದ

ಬಂಗಾರ ಬೆಳಕು ಮತ್ತು ಒಲೆಯೊಡತಿ

ಗುಡಿಸಲಿಗೆ ಹೊಚ್ಚಿದ್ದ ತಗಡಿನಿಂದ ತಟ ತಟ ನೀರು... ಬಿಳಿ ಜರ್ಮನಿ ಪ್ಲೇಟಿನ ತುಂಬ ಬಂಗಾರ ಬಣ್ಣ. ಏದುಸಿರಿನ ಮಳೆಗೆ ನೆಲ್ಲಕ್ಕಿ ತೂತು. ಉಬ್ಬಿ ನಿಂತ ಸೆಗಣಿ ಹಕಳೆಗೆ ಯಾವ ದೇಶದ್ದೋ ರೂಪು. ಆ ರೂಪಿಗೂ ಆ ತೂತಿಗೂ ಅದೇನ್ಥದ್ದೂ ಸಂಬಂಧ. ಸುತ್ತಲೆಲ್ಲ ಪರಿಮಳ ಅದರಿಂದಲೇ. ಇಳೆಯ ಒಡಲಿನಿಂದ ಇಣುಕಿದ ಕೆಂಪು ಜಲ್ಲಿಗೆ, ಮಳೆಗೆ ತೋಯ್ದು ಮಡಿಯಾದೆನೆಂಬ ಸಮಾಧಾನ. ಒಲೆ ಮಾಡಿನ ಒಡತಿಗೋ ಒಳಗೊಳಗೆ ತೋಯ್ದ ಅನುಭವ, ಬಿಸಿ ಹೆಂಚು ಎದುರಿಗಿದ್ದರೂ...ಬಂಗಾರ ಹನಿ ಉದುರಿ, ಕಾವಲಿ ಚುರುಗುಟ್ಟಿದಾಗಲೇ ಮತ್ತೆ ಎಚ್ಚರ ಆಕೆಗೆ.

ಕಟ್ಟಿಗೆಯೇನೋ ತೋಯ್ದು ತೆಪ್ಪಗಾಗುತ್ತಿತ್ತು. ಅದರ ‘ತಾಪ’ ಮಾತ್ರ ಅದೇ ಒಲೆಯೊಡತಿಗೆ... ಬೂಸರು ಹಿಡಿದ ಬೀಡಿ ನಗಿಸಲು ಮೀಸೆಯೊಡೆಯನ ಒದ್ದಾಟ. ಕಣ್ ಕಿರಿದು ಮಾಡಿ ನಗತೊಡಗಿತು ಹೊರಸಿಗೆ ಬಿಗಿದ ಪುಂಡಿನಾರು : ತನ್ನ ಕಟ್ಟಿಗೆಗೆ ಬಿಗಿದದ್ದು ಈ ಕೈಗಳೇ ತಾನೆ? ಎಂದು. ಆದರೂ ಒಳಗೊಳಗೆ ಖುಷಿ, ಬೇರು ಕಿತ್ತು, ಹಗ್ಗ ಹೊಸೆದು, ಹೀಗೆ ಕಟ್ಟಿಗೆಗೆ ಬಿಗಿದಾತನ ಪರಿಪಾಡಲು ನೋಡಿ. ಒಂದಿರುಳು, ಒಂದು ಹಗಲು ಮಾತ್ರ ಕಳೆದಿದೆ ಒಡಲಿನಿಂದ ಮಡಿಲಿಗೆ ಜಾರಿ. ಅಪ್ಪನಂತೆ ಕಪ್ಪಗಿದ್ದರೂ ಅವ್ವನ ತಾಳಿ ನೊಂದುಕೊಳ್ಳುವಷ್ಟು ಬಂಗಾರ ಬೆಳಕು. ಒಲೆಯೊಡತಿಗೋ ಅರೆಬಿಸಿ ಎಣ್ಣೆಯನ್ನೇ ಅಳ್ಳೆತ್ತಿಗೊತ್ತಿ ತಟ್ಟಿ ವಂಶಕುಡಿ ಮಲಗಿಸಿದ ಸಂತಸ. ಎದೆಹಗುರು ಮಾಡಿದ ಕಂದನೊಮ್ಮೆ ನೋಡಿ ನಿದ್ದೆಗೆ ಜಾರುವ ತವಕ ಹೆತ್ತೊಡಲಿಗೆ...

ಮತ್ತೆ ಅದೇ ಏದುಸಿರಿನ ಮಳೆ...

ಇನ್ನೆರಡು ತಾಸು ಕಳೆದರೆ ಬಂಗಾರ ಕಿರಣಗಳೊಡೆಯನ ಆಗಮನ. ಗೊರಕೆಗೆ ಆಗಾಗ ಬೆದರುವ ಮೀಸೆಗುಚ್ಛ. ನ್ಯಾಗೊಂದಿ ಸಂದಿ ಅಪ್ಪಿದ ಬೀಡಿಗೂ, ಒಲೆಯ ತಲೆಯೇರಿದ ಊದುಗೊಳವಿಗೂ ಸಕ್ಕರೆ ನಿದ್ರೆ. ಹೊಗೆಗಪ್ಪು ಅಡರಿದ ಗೋಡೆ ಮೇಲೆ ಧ್ಯಾನಸ್ಥ ಹಲ್ಲಿ. ಕೊಂಚ ಮೈಮರೆತರೆ, ಹಾರೀತು ಪ್ರಾಣಪಕ್ಷಿ ಎಂಬ ನಡುಕದಲ್ಲೇ ರೆಕ್ಕೆ ಹುಳು. . .ಎದೆಕಾವಿಗೆ ಮೊಗಮಾಡಿದ ತುಂಬುಗಣ್ಣಿನ ಕೂಸು. ಪುಂಡಿನಾರಿಗೆ ಮೈಭಾರ ಹೊರಿಸಿದ ಅಮ್ಮ, ಅಗ್ಗಿಷ್ಠಿಗೆ ಮಗ್ಗುಲಿಗೆ ಆ ಅಮ್ಮನ ಅಮ್ಮ ಅದೇ ಆss ಒಲೆಯೊಡತಿ... ಅಪ್ಪಿದ ರೆಪ್ಪೆ ನುಸುಳಿ ಹರಿಯುತ್ತಿದ್ದವು ಕಣ್ಣ ಹನಿಗಳು, ಆ ಹನಿಗಳಿಗೆ ಸಾಥ್ ನೀಡುತ್ತಿದ್ದವು ಜಂತಿಯ ಸಾರವನ್ನೆಲ್ಲ ಹೀರಿ, ಬಂಗಾರದುಡುಗೆ ತೊಟ್ಟ ಹನಿಗಳು. ಆ ಹನಿಯ ಹಸಿಯಲ್ಲೇ, ಹೊದ್ದು ಮಲಗಿದವರೆಲ್ಲ ಅದಾಗಲೇ ಕದ್ದಾಗಿತ್ತು ಹೊನ್ನ ಕನಸು.

ಆದರೆ.... ಈ ಮನೆ ಹೊಸ್ತಿಲು ತುಳಿದು ಮೂವತ್ತು ದೀಪಾವಳಿ, ಯುಗಾದಿ ಹೀಗೆ ಏನೆಲ್ಲ ಕಳೆದವು ಜೊತೆಗೆ ಅಕ್ಷತೃತಿಯಾ. ಹೌದು. ಈ ಸಲವೂ ಹೀಗೆ ಬಂದು ಹಾಗೇ ಹೋಯಿತು ಅಕ್ಷತೃತಿಯಾ...ಆಗಾಗ ಹೇಳುತ್ತಿದ್ದ ಅವ್ವನ ಧ್ವನಿ ಒಲೆಯೊಡತಿಯ ಮುರುಕು ಬೆಂಡೋಲೆ ಪಕ್ಕದಿಂದ ಹಾಯ್ದು ಹೋಯಿತು. ‘ಈವತ್ತಿನ ದಿನ ಒಂದು ಗುಂಜಿನಾದ್ರೂ ಬಂಗಾರ ತಗೊಂಡ್ರೆ ಒಳ್ಳೆಯದು. ಅಷ್ಟೇ ಅಲ್ಲ ದುಪ್ಪಟ್ಟೂ ಆಗತ್ತೆ. ಹಾಗಂತsss ನಮ್ಮ ಅಮ್ಮ ಹೇಳ್ತಿದ್ರು. ನಾನಂತೂ ಕಾಣ್ಲಿಲ್ಲ, ನೀನಾದ್ರೂ...’ ಅಮ್ಮ ಬಿಟ್ಟು, ಕೊಟ್ಟು ಹೋದ ಆಸ್ತಿಯೆಂದರೆ ಇದೊಂದೇ.

ಆದರೆ...

ದಿನಸರಿದಂತೆ ತಪ್ಪಲೇ ಇಲ್ಲ ಗಂಜಿಗೆ ಗುದ್ದಾಟ. ವರ್ಷ ಕಳೆದಷ್ಟೂ ಮಳೆಯ ಕಾಟ. ಆ ಮಳೆಗೊಂದರಂತೆ ಬಸುರು-ಬಾಣಂತನ, ಆಳವಿ ಪಾಯಸಕ್ಕೆ ಕಟ್ಟಿಗೆ ಹೊಂಚಾಟ. ಅಂಟಿನುಂಡಿಗೆ ಕೊಬ್ಬರಿ ಕುಟ್ಟಾಟ. ಮತ್ತದೇ ಅಳು, ಮತ್ತದೇ ನಗು, ಮತ್ತದೇ ಬೆಳಕು, ಮತ್ತದೇ ಕತ್ತಲು, ನಡುನಡುವೆ ಬಂಗಾರಬೆಳಕು. . . .ಕನಸ ಹೂಡಲು, ನನಸ ಮಾಡಲು. ಬದುಕ ಬಂಡಿ ದೂಡಲು...

-ಶ್ರೀದೇವಿ ಕಳಸದ

(ಈ ಕಥೆ ಕೆಂಡಸಂಪಿಗೆ.ಕಾಮ್ ನಲ್ಲಿ ‘ಅಕ್ಷತೃತಿಯಾ’ ಎಂಬ ತಲೆಬರಹದಡಿ ಪ್ರಕಟವಾಗಿದೆ)

ಕುಂಚ ಗೋಧೂಳಿ

ಹೊತ್ತದು ಗೋಧೂಳಿ
ಹುಡಿಮಣ್ಣು ಅಮರಿ
ಬಿಸಿಲ ಕೋಲ ಕರಗಿ,
ನವಿಲ ನಲಿವ ಸಮಯ

ಅದ್ಯಾವ ಗಳಿಗೆಯೋ
ಹಸಿ ಜಾರಿತು ಅರಿಶಿಣ
ಸವರಿದ ಚಂದನ...

ಕಣ್ಣಂಚಿಗಿಲ್ಲ ಮಿಂಚು
ತೀಡಿದರೂ
ಕಾಡಿಗೆ.
ತುಸ ಸಪ್ಪೆಯೇ ತುಟಿ
ಜೇನ ಸವರಿ
ಕೆಂಗುಲಾಬಿ
ಸೋಕಿಸಿದರೂ.

ತುಸು ಹೆಚ್ಚಾಯಿತೇ?
ಎನ್ನುತ್ತ ಹಚ್ಚಿದ
ರಂಗೂ ತಂದಿಲ್ಲ
ಮೆರಗು ಕೆನ್ನೆಗೆ.
ಮುತ್ತಲ್ಲ, ಹವಳಲ್ಲ
ವಜ್ರದಾ ತುಣಕೊಂದ
ಗಿಣಿಮೂಗಿಗಿಟ್ಟರೂ
ಹೊಳಪಿಲ್ಲ ಅದಕೆ.
ಕಳೆಯಿಲ್ಲ ಮೊಗಕೆ.

ಅಲ್ಲೊಬ್ಬ ಬಂದ.
ಗುಬ್ಬಚ್ಚಿ ಗೂಡಿಗೂ
ಬಾವಲಿಗಳ ಜೋಕಾಲಿಗೂ
ಹದವಾಗಿತ್ತು ತಲೆ
ಹಿತವಾಗಿತ್ತು ಗಡ್ಡ.
ಅಂದೆಂದೋ ತೊಟ್ಟಿದ್ದ
ಅಂಗಿಗೂ, ಹೆಗಲಿಗಂಟಿದ ಚೀಲಕ್ಕೂ
ಬೇಸರಿಸಿತ್ತು ಅವನ ಸಂಗ.

ಅವಳ ನೋಡಿದ ಅವನಲ್ಲಿ
ಅದೆಂಥದ್ದೋ
'ಸಂಚಲನ'
ಒಣಗಿದ ಬಣ್ಣ
ಅಂಟಿದ ಕುಂಚಕೂ ಕೂಡ.
ಅವಳನೊಸಲಿಗಿಟ್ಟ ಬೊಟ್ಟ.
ಅವಳಿಗರಿವಿಲ್ಲದ, ಅವಳೊಳಗಿನ
ಹೆಣ್ತನ ದಟ್ಟ ದಿಟ್ಟ.
ಅದರೊಂದಿಗೆ ಹೊರಬಂದ
ಅವನಲ್ಲಿನ ಕಲೆಗಾರ...

-ಶ್ರೀದೇವಿ ಕಳಸದ

(ಕೆಂಡಸಂಪಿಗೆಯ ‘ದಿನದ ಕವಿ’ಯ ಮೊದಲ ಕವನ ಇದು. )

http://www.kendasampige.com/article.php?id=783

ಎಸ್‌ಪಿಬಿ - ೬೨, ಬಾಲೂ ಸಾರ್‍‌ಗೊಂದು ಪತ್ರ

ಗಾನ ವಿದ್ಯಾ ಬಡೀ ಕಠಿಣ ಹೈ?
ಬಾಲೂ ಸರ್‍ ನನ್ನ ಈ ಪ್ರಶ್ನೆಗೆ ನೀವಿಂದು ಉತ್ತರ ಹೇಳಲೇಬೇಕು. ಗದಗಿನ ಪುಟ್ಟರಾಜ ಗವಾಯಿಗಳು ರಚಿಸಿ, ಜೀವನಪುರಿ ರಾಗದಲ್ಲಿ ಬಂಧಿಸಿದ ಈ ಬಂದಿಶ್ ನನಗೆ ಸುಮಾರು ಹನ್ನೆರಡು ವರ್ಷಗಳಿಂದ ಕಾಡುತ್ತಲೇ ಇದೆ. ಆ ಕಾಡುವಿಕೆಯಲ್ಲೇ ಹಲವಾರು ಪ್ರಶ್ನೆ, ಉತ್ತರ, ನೋವು, ಕುತೂಹಲ, ಆಶ್ಚರ್ಯ, ಅದ್ಭುತ ಹೀಗೆ ಏನೆಲ್ಲ ಮಿಳಿತಗೊಂಡಿವೆ...

***

ಎಲ್ಲಿಂದಲೋ ತೇಲಿ ಬಂದ ಒಂದು ರಾಗದ ಅಲೆ.... ದುಂಡು ಮಲ್ಲಿಗೆ ಮೊಗ್ಗು ಬಿಡಿಸುವಾಗ, ಅದರ ರಾಗವಿಸ್ತಾರದ್ದೇ ನೆನಪು... ಗಿರಗಿರನೆ ತಿರುಗುವ ಫ್ಯಾನಿನ ಏಕನಾದವನ್ನೋ, ದೂರದಿ ಕೇಳುವ ರೈಲಿನ ಕೂಗನ್ನೋ, ಗೋಧಿ ಬೀಸಿಕೊಂಡು ಬರಲು ಅಮ್ಮ ಕಳುಹಿಸಿದ ಗಿರಣಿ ಯಂತ್ರದ ಶಬ್ದದಲ್ಲೋ, ಅಪ್ಪನಿಗೆ ಕಿರಿಕಿರಿಯೆನಿಸಿದರೂ ಭಾನುವಾರದ ದೋಸೆಗಾಗಿ ಪಟ್ಟುಬಿಡದೇ ಒಂದೇ ಸಮನೆ ಸದ್ದು ಮಾಡುವ ಮಿಕ್ಸಿ ಶೃತಿಯೊಂದಿಗೋ..... ಕಾಡುವ ಆ ರಾಗದ ಅವರೋಹ ಆರೋಹವನ್ನು ಗುನುಗುನಿಸುವ ಖಯಾಲಿ. ಅದು ಹರಿಸುವ ಖುಷಿಯಲ್ಲೇ ಗುರುಗಳ ಮನೆಗೆ ಹೋದಾಗ, 'ಒಂದು ರಾಗವನ್ನ ಹತ್ತತ್ತು ವರ್ಷ ಅಭ್ಯಾಸ ಮಾಡಿಸುತ್ತಿದ್ದರು ನಮ್ಮ ಗುರುಗಳು!' ಎಂದು ಆಲಾಪಿಸುವ ಅವರ ತತ್ವಕ್ಕೆ, ಮನದ ಮಾತು ಮೌನದಲ್ಲೇ ತಿಹಾಯಿ ಹೇಳತೊಡಗುತ್ತಿತ್ತು.'ಅಪರಾತ್ರಿ ಎಬ್ಬಿಸಿ, ಮಾಲಕಂಸದ ಸಮಯವಲ್ಲವೇ ಇದು? ತಂಬೂರಿ ಶ್ರುತಿ ಮಾಡಿ ಎಂದು ಹೇಳುವ ನಮ್ಮ ಗುರುಗಳ ಲಹರಿಗಾಗಿ ನಾವು ಎಷ್ಟು ವರ್ಷ ಕಾಯ್ದಿಲ್ಲ? ಕೇವಲ ಒಂದು ರಾಗದ ಕಲಿಕೆಗಾಗಿ ಜಾಗರಣೆ ಮಾಡಿದ ರಾತ್ರಿಗಳೆಷ್ಟೋ!' ಎಂದು ಆಗಾಗ ಕವಳ ತುಂಬಿದ ಬಾಯಿಯಿಂದ ಗುರುಗಳು ತಾನಿಸಿದಾಗ, ಸಂಧ್ಯಾಸಮಯದ ಶೃಂಗಾರ ರಾಗ 'ಯಮನ್' ಮನದಲ್ಲಿ ನಲಿದಾಡುತ್ತಿದ್ದರೂ ಬೆಳಗಿನ ಭೈರವವನ್ನೇ ಗಂಭೀರವಾಗಿ ಹಾಡಲು ಮನಸ್ಸು ತಯಾರಾಗುತ್ತಿತ್ತು.

***

'ಒಂದಲ್ಲ ಎರಡಲ್ಲ ಐದ್ಹತ್ತು ವರ್ಷ ಗುರುಗಳ ಬಟ್ಟೆ ಒಗೆದು, ಪಾತ್ರೆ ತೊಳೆದು, ಕಸ ಗುಡಿಸಿದ್ದಕ್ಕೇ ಇಂದು ಈ ಸ್ಥಾನ. ದಿನಗಟ್ಟಲೇ ಒಂಟಿಗಾಲಿನಲ್ಲಿ ನಿಂತು ಗುರುಗಳಿಗೆ ಗೌರವ-ವಿನಯ ಸಲ್ಲಿಸಿದ್ದರ ಫಲವೇ ನಮ್ಮನ್ನಿವತ್ತು ಹೀಗೆ ಭದ್ರವಾಗಿ ನಿಲ್ಲಿಸಿರುವುದು'. ಗುರುಗಳ ರಾಗವಿಸ್ತಾರ ಹೀಗೆ ಕ್ರಮಿಸುತ್ತಿರುವಾಗ, ಅಷ್ಟು ದೂರದೂರಿನಿಂದ ಪ್ರಯಾಣಸಿದ ಕೇವಲ ಎಂಟ್ಹತ್ತು ವರ್ಷದ ಪುಟ್ಟ ಮನಸ್ಸಿನ ಗಂಟಲು ಆರಿ ಅಂಟಿಕೊಳ್ಳುತ್ತಿದ್ದರೂ 'ಒಂದು ಗ್ಲಾಸು ನೀರು ಬೇಕಿತ್ತು' ಎಂದು ಹೇಳಿದರೂ ಅದು ಮಂದ್ರಸಪ್ತಕದ ಕೆಳಗೆ ಜಾರಿ ಹೋಗುತ್ತಿತ್ತು....

***

'ಇಪ್ಪತ್ತಿಪ್ಪತ್ತು ವರ್ಷ ಗುರು ಸೇವೆಗೈದು, ಗುರುಗಳ ಅಪ್ಪಣೆಯಾದಾಗಲೇ ವೇದಿಕೆಯೇರುವ ಅಪೂರ್ವ ಸಮಯ. ಆ ಒಂದೇ ಒಂದು ಘಳಿಗೆಗಾಗಿ ನಾವು ಮಾಡಿದ್ದು ಒಂದು ರೀತಿ ತಪಸ್ಸೇ ಸರಿ ' ಎಂದು ಆಗಾಗ ಷಡ್ಜ್ ದ ಮೇಲೆ ಓಂಕಾರ, ಹ್ರೀಂಕಾರ ನಾದ ಹೊಮ್ಮಿಸುವ ಗುರುವರ್ಯರ ಎದುರಿಗೆ, 'ನಿನ್ನೆ ಹಾಡಿದ ಭೈರವಿಯ ತರಾನಾಕ್ಕೆ ಸಾವಿರಾರು ಚಪ್ಪಾಳೆ ಗಿಟ್ಟಿಸಿಕೊಂಡದ್ದು ಹೇಳು ಹೇಳು....' ಎಂದು ಮನಸ್ಸು ಒತ್ತಾಯಿಸಿದರೂ ನಾಭಿಯಿಂದ ಹೊರಡುವ ಶಬ್ದ ಪುನಃ ಆಲ್ಲೇ ವಿರಮಿಸುತ್ತಿತ್ತು.

****

ಬಾಲು ಸರ್‍, ಅದ್ಯಾಕೋ ನನ್ನ ಮನಸ್ಸಿಗೆ ಇದನ್ನೆಲ್ಲ ಈವತ್ತು ನಿಮ್ಮ ಮುಂದೆ ಹೇಳಿಕೊಳ್ಳಬೇಕೆನ್ನಿಸಿತು. ಏಕೆಂದರೆ, ನೀವೂ ಇಂತಹ ಪರಿಸ್ಥಿತಿಯನ್ನು ಎದುರಿಸಿ ಬಂದವರಲ್ಲವಾ? ಹೇಗೆ ಬೆಳೆದಿರಿ ಬಾಲು ಸರ್‌? ಇಂಥದನ್ನೆಲ್ಲ ಅನುಭವಿಸಿಯೂ, ಎಳೆಯರ ಮುಂದೆ ಅದ್ಹೇಗೆ ದೊಡ್ಡ ಗುರುವಾಗಿ ನಿಂತಿರಿ? ಯಾವ ವಿನಯ ನಿಮ್ಮ ದೊಡ್ಡ ಕಾಯದಲ್ಲಿ ಈ ಪರಿಯ ವಿನಯ ತುಂಬಿತು? ಅದ್ಹೇಗೆ ನೀವು ಎಳೆಯರ ತಲ್ಲಣವನ್ನು ಫ್ರೆಶ್‌ ಆಗಿ ಅನುಭವಿಸುತ್ತೀರಿ? ಅವರ ನೋವನ್ನು, ನಲಿವನ್ನು, ಪ್ರಯತ್ನ ಪಡುವ ಪರಿಯನ್ನು ಅದೆಂಥ ತೀವ್ರತೆಯಿಂದ ಆಸ್ವಾದಿಸುತ್ತೀರಿ? ಒಬ್ಬ ಗಾಯಕ ಚೆನ್ನಾಗಿ ಹಾಡುವುದರಿಂದ ಬೆಳೆಯುತ್ತಾನಾ? ಅಥವಾ ಚೆನ್ನಾಗಿ ಹಾಡುವವರನ್ನು ಬೆಳೆಸುವ ಮೂಲಕವಾ? ನೀವೇ ಉತ್ತರಿಸಬೇಕು ಬಾಲು ಸರ್‌.ಈ ಪ್ರಶ್ನೆಗೆ ಉತ್ತರ ನಿಮ್ಮಿಂದ ಮಾತ್ರ ನಿರೀಕ್ಷಿಸುತ್ತಿರುವುದಕ್ಕೆ ನಿಮ್ಮ ಅಪೂರ್ವ ವ್ಯಕ್ತಿತ್ವವೇ ಕಾರಣ...
-ಶ್ರೀದೇವಿ ಕಳಸದ
(ಎಸ್‌ಪಿಬಿ - ೬೨, ಬಾಲೂ ಸಾರ್‌ಗೊಂದು ಪತ್ರ ಎಂಬ ಶೀರ್ಷಿಕೆಯಡಿ ‘ಕೆಂಡಸಂಪಿಗೆ’ಯಲ್ಲಿ ಪ್ರಕಟವಾಗಿದೆ)
http://kendasampige.com/article.php?id=798

Wednesday, April 9, 2008

ನಿಮಗೂ ಹೀಗೆ ಅನಿಸಿದೆಯೆ?

ಹಲವಾರು ಬಾರಿ ಹಾಗನ್ನಿಸಿದೆ.

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ.

ಏಕೆ ಹಾಗಾಗುತ್ತದೆ?

ನಾನು ಸತ್ಯ ಹೇಳಿದರೆ ನಮ್ಮ ಇದ್ದಬದ್ದ ಸಂಬಂಧ ಅಲ್ಲಿಗೇ ಮುಕ್ತಾಯವಾಗುತ್ತದೆ ಎಂಬುದು ನನಗೆ ಗೊತ್ತು. ಅದು ವೃತ್ತಿಪರ ಆಗಿರಬಹುದು ಅಥವಾ ವೈಯಕ್ತಿಕವಾಗಿರಬಹುದು- ಒಟ್ಟಿನಲ್ಲಿ ನಮ್ಮ ಸಂಬಂಧ ಅಂತ್ಯಗೊಳ್ಳುತ್ತದೆ.

ತುಂಬ ಸಾರಿ ನೋಡಿದ್ದೇನೆ: ಸಾಮಾನ್ಯವಾಗಿ ದಡ್ಡರು ಉನ್ನತ ಸ್ಥಾನದಲ್ಲಿ ಕೂತಿರುತ್ತಾರೆ. ಪ್ರತಿಭಾವಂತರನ್ನು ಕಂಡರೆ ಅವರಿಗೆ ಅಸೂಯೆ, ಕೀಳರಿಮೆ. ಅದನ್ನು ಹೋಗಲಾಡಿಸಲು ಗತ್ತು ನಟಿಸುತ್ತಾರೆ. ತಮಗೆ ಎಲ್ಲದೂ ಗೊತ್ತಿದೆ ಎಂಬ ಮುಖವಾಡ ತೊಡುತ್ತಾರೆ. ಅದೇ ಹೊತ್ತಿಗೆ, ತನ್ನ ಹುಳುಕು ಯಾರಿಗಾದರೂ ಗೊತ್ತಾದರೆ ಹೇಗೆ ಎಂಬ ಅಳುಕೂ ಅವರನ್ನು ಕಾಡುತ್ತಿರುತ್ತದೆ. ಹೀಗಾಗಿ, ಕೆಲಸ ಗೊತ್ತಿರುವವರನ್ನು ಕಂಡರೆ ಭಯ. ಅವರನ್ನು ಕಾಡಲು ಶುರು ಮಾಡುತ್ತಾರೆ. ಅವರು ಮಾಡಿದ್ದೆಲ್ಲ ತಪ್ಪು ಎನ್ನುತ್ತಾರೆ. ಬೆಳೆಯಲು ಸಾಧ್ಯವಿರುವ ಬಾಗಿಲುಗಳನ್ನೆಲ್ಲ ಮುಚ್ಚುತ್ತಾರೆ. ತಾವಿಲ್ಲದಾಗ ಬಾಗಿಲು ತೆಗೆದುಕೊಂಡು ಬಂದರೆ? ಎಂಬ ಅಳುಕಿನಿಂದಾಗಿ, ಹೊರಗೇ ಕಾವಲು ನಿಲ್ಲುತ್ತಾರೆ.

ಇದು ನಿಜಕ್ಕೂ ದುರ್ಭರ ಪರಿಸ್ಥಿತಿ. ಅವಕಾಶ ನಿರಾಕರಿಸಲ್ಪಟ್ಟ ವ್ಯಕ್ತಿಯೂ ಬೆಳೆಯುವುದಿಲ್ಲ, ಆತನ ಕಾವಲಿಗೆ ನಿಂತವನೂ ಬೆಳೆಯಲಾರ. ಇಂಥ ಪರಿಸ್ಥಿತಿ ಉಂಟಾದಾಗ, ಇಬ್ಬರು ವ್ಯಕ್ತಿಗಳು ಮಾತ್ರವಲ್ಲ, ಸಂಸ್ಥೆ ಕೂಡ ಹಾಳಾಗುತ್ತದೆ. ಆಗ ಏನು ಮಾಡಬೇಕು?

ನಾನು, ಮೌನವಾಗಿ ಇದ್ದುಬಿಡುತ್ತೇನೆ. ಗತ್ತು ತೋರಿಸುವವನಿಗೇ ಮೊದಲ ಬ್ಯಾಟಿಂಗ್ ಭಾಗ್ಯ ದಕ್ಕಲಿ. ಅವನದೇ ಮಾತು ನಡೆಯಲಿ. ತನ್ನ ಗತ್ತು ಮತ್ತು ಶಕ್ತಿ ಪ್ರದರ್ಶನದ ಅತಿರೇಕದಲ್ಲಿ ಆತನ ದೌರ್ಬಲ್ಯ ಬಲು ಬೇಗ ಬಯಲಾಗುತ್ತ ಹೋಗುತ್ತದೆ.

ಮೌನವಾಗಿದ್ದುಕೊಂಡು ಓದು-ಬರೆಹ ಮುಂದುವರೆಸಿಕೊಂಡು ಹೋಗುತ್ತೇನೆ. ಅದೊಂಥರಾ ವನವಾಸದ ಸುಖ. ಏನೋ ಶಾಂತಿ, ನೆಮ್ಮದಿ ತರುವ ಮೌನ. ಅಧ್ಯಯನದಲ್ಲಿ ಮುಳುಗಿದಂತೆ, ಅತ್ತ ಗತ್ತು ಯಾವತ್ತೋ ಕರಗಿರುತ್ತದೆ. ಹುಳುಕು ಹೊರಬಿದ್ದಿರುತ್ತದೆ. ಒಮ್ಮೊಮ್ಮೆ ವರ್ಷಗಟ್ಟಲೇ ಕಾಯಬೇಕಾಗಬಹುದು.

ಅಷ್ಟೊಂದು ಸಮಾಧಾನ/ಅನಿವಾರ್ಯತೆ ನನಗಿದ್ದರೆ ಕಾಯುತ್ತೇನೆ. ಇಲ್ಲದಿದ್ದರೆ, ಎದ್ದು ಹೋಗುತ್ತೇನೆ.ಏಕೆಂದರೆ, ಬದುಕಿನಲ್ಲಿ ಮುಚ್ಚಿದ ಬಾಗಿಲುಗಳಿಗಿಂತ ತೆರೆದ ಬಾಗಿಲುಗಳೇ ಹೆಚ್ಚು. ಅದು ನನ್ನ ನಂಬಿಕೆಯಷ್ಟೇ ಅಲ್ಲ, ಅನುಭವವೂ ಹೌದು.

- ಚಾಮರಾಜ ಸವಡಿ

ಕಚೇರಿ ಎಂದರೆ ಸುಮ್ಮನೇನಾ?


ಅದೊಂದು ಕಚೇರಿ. ತನ್ನದೇ ಲೆಕ್ಕದಲ್ಲಿ ಅದೊಂದು ಪ್ರತ್ಯೇಕ ಜಗತ್ತು.

ಹಾಗಂದರೆ, ಅಲ್ಲಿ ಎಲ್ಲವೂ ಉಂಟು ಎಂದರ್ಥ. ಒಳ್ಳೆಯವರು, ಕೆಟ್ಟವರು, ಕೆಲಸಗಾರರು, ಸೋಮಾರಿಗಳು, ಶೂನ್ಯ ಪ್ರತಿಭೆಗಳು, ಮೊದ್ದುಮಣಿಗಳು, ಪೆದ್ದು ಮುಂಡೆಯರು- ಹೀಗೆ ಎಲ್ಲರೂ ಇರುತ್ತಾರೆ. ಕೆಲವರು ಕೆಲಸ ಮಾಡುತ್ತಲೇ ಇರುತ್ತಾರೆ. ಅದು ಮುಗಿಯುವುದೇ ಇಲ್ಲ. ಇನ್ನು ಕೆಲವರು ಹಾಗೇ ಕೂತಿರುತ್ತಾರೆ, ಅವರ ಕೆಲಸ ಪ್ರಾರಂಭವಾಗುವುದೇ ಇಲ್ಲ.

ಇಂಥಪ್ಪ ಕಚೇರಿಯಲ್ಲಿ ಹಲವಾರು ದೃಶ್ಯಗಳು ನಿತ್ಯ ನಡೆಯುತ್ತವೆ. ಕೆಲವೊಂದು ಪುನರಾವರ್ತನೆಯಾದರೆ, ಇನ್ನು ಕೆಲವು ನಿರೀಕ್ಷಿತ. ಅಪರೂಪಕ್ಕೊಮ್ಮೆ ಅನಿರೀಕ್ಷಿತ ಘಟನೆಗಳು ನಡೆಯುವುದುಂಟು.

ಒಳ ಬರುತ್ತಲೇ ಬೂಟಾಟಿಕೆಯ ವಾಸನೆ ಬಡಿಯುವುದಷ್ಟೇ ಅಲ್ಲ, ಕಣ್ಣೆದುರು ರಾಚಲೂತೊಡಗುತ್ತದೆ. ’ನಿನ್ನೆ ಪಾರ್ಟಿಗೆ ಹೋಗಿದ್ದೆ ಕಣೆ, ಏನ್‌ ಚೆನ್ನಾಗಿತ್ತು ಅಂತೀಯಾ’ ಎಂದು ಲಲನೆಯೊಬ್ಬಳು ಹೇಳುತ್ತಿದ್ದರೆ, ಅವಳ ಗೆಳತಿಯರ ಪೈಕಿ ಒಬ್ಬಿಬ್ಬರು ಮುಖವರಳಿಸಿ ಕೇಳಿಸಿಕೊಂಡರೆ, ಉಳಿದವರು ತಮ್ಮ ಕೆಲಸದಲ್ಲಿ ಬಿಜಿಯಾಗಿರುವ ನಟನೆ ಮಾಡುತ್ತಲೇ ಕಿವಿ ಅತ್ತ ತೇಲಿಬಿಟ್ಟಿರುತ್ತಾರೆ. ಇನ್ನೊಂದೆಡೆ, ಬ್ರೆಕಿಂಗ್‌ ನ್ಯೂಸ್‌ ಕೊಡುವ ಇರಾದೆಯಲ್ಲಿ ವರದಿಗಾರ ಗಂಭೀರತೆ ನಟಿಸುತ್ತ ಸರಭರ ಓಡಾಡುತ್ತಿರುತ್ತಾನೆ. ಸರಿಯಾಗಿ ಹುಡುಕಿದರೆ, ಅಂದಿನ ದಿನಪತ್ರಿಕೆಯ ಯಾವುದೋ ಒಂದೆಡೆ, ’ಬ್ರೆಕಿಂಗ್‌ ನ್ಯೂಸ್‌’ ಸುಳಿವು ಸಿಗುತ್ತದೆ.

ಎಲ್ಲರಿಗಿಂತ ತಡವಾಗಿ ಹಿರಿಯ ತಲೆಗಳು ಬರುತ್ತವೆ. ಜಗತ್ತಿನ ಭಾರವೆಲ್ಲ ತಮ್ಮ ತಲೆಯ ಮೇಲಿದೆ ಎಂಬಂತೆ ಮುಗುಳ್ನಗು ಮನೆಯಲ್ಲಿಟ್ಟು, ಗಂಭೀರವದನರಾಗಿ ಬರುತ್ತಾರೆ. ಬಂದವರೇ ಬ್ಯಾಗಿಟ್ಟು, ಕಾರಣವಿಲ್ಲದೇ ಆ ಕಡೆಯಿಂದ ಈ ಕಡೆ ಓಡಾಡುತ್ತಾರೆ. ಸುಳ್ಳು ಸುಳ್ಳೇ ಕಂಪ್ಯೂಟರ್ ಪರದೆಗಳನ್ನು ದಿಟ್ಟಿಸುತ್ತಾರೆ. ಸಹೋದ್ಯೋಗಿಗಳನ್ನು ಕರೆಯುತ್ತಾರೆ. ಅರ್ಥವಿಲ್ಲದ ವಿಷಯಗಳನ್ನು ಮಾತನಾಡಿ ಅವರಲ್ಲಿ ಗೊಂದಲ ಮೂಡಿಸುತ್ತಾರೆ. ಇದ್ದಕ್ಕಿದ್ದಂತೆ ಅವರನ್ನು ಅದೇ ಸ್ಥಿತಿಯಲ್ಲಿ ಬಿಟ್ಟು, ಇನ್ನಿಲ್ಲದ ಸೀರಿಯೆಸ್‌ನೆಸ್‌ನಲ್ಲಿ ಕಂಪ್ಯೂಟರ್ ತೆರೆ ಮೇಲೆ ದೃಷ್ಟಿ ಇಟ್ಟು ಕೂತುಬಿಡುತ್ತಾರೆ.

’ಅರೆರೆ, ನೀವು ನಮ್ಮ ಬಾಸ್‌ ಬಗ್ಗೆ ಹೇಳುತ್ತಿಲ್ಲ ತಾನೆ?’ ಎಂದು ನಿಮಗೆ ಅನ್ನಿಸಿದರೆ, ಅಚ್ಚರಿ ಬೇಡ. ಮಿತ್ರರೇ, ಎಲ್ಲರ ಬಾಸ್‌ಗಳೂ ಸಾಮಾನ್ಯವಾಗಿ ಇರೋದೇ ಹೀಗೆ. ಎಲ್ಲೋ ಓದಿದ ವಾಕ್ಯವೊಂದು ಈ ಸಂದರ್ಭದಲ್ಲಿ ನೆನಪಾಗುತ್ತಿದೆ: ನಮಗಿಂತ ದಡ್ಡರು, ತಿಕ್ಕಲರು, ಪೆದ್ದರು, ಮೂರ್ಖರು, ದುಷ್ಟರು, ಅತ್ತೆ ಮನಃಸ್ಥಿತಿಯವರು ಸಾಮಾನ್ಯವಾಗಿ ನಮ್ಮ ಸೀನಿಯರ್‍ ಆಗಿರುತ್ತಾರಂತೆ. ಅನುಮಾನ ಬಂದರೆ ಕೊಂಚ ಗಮನಿಸಿ ನೋಡಿ: ನಮ್ಮ ಬಹುತೇಕ ಸೀನಿಯರ್‌ಗಳು ಹೀಗೆ ತಾನೇ ಇರೋದು!

ನೀವು ಉತ್ತಮ ವಿಚಾರ ಹೇಳಿದರೆ, ಆ ಮನುಷ್ಯನಿಗೆ ಕೇಳಿಸಿಕೊಳ್ಳುವ ಸಹನೆಯೂ ಇರುವುದಿಲ್ಲ. ’ಮೊದಲು ನಾನು ಹೇಳೋದು ಕೇಳಿ’ ಎಂದೋ, ’ಅದೆಲ್ಲ ನಡೆಯೋಲ್ಲ’ ಎಂದೋ, ’ಅದನ್ನು ಮಾಡುತ್ತ ಕೂತರೆ ತಡವಾಗುತ್ತದೆ’ ಎಂದೋ ತನ್ನ ಕೆಳಮಟ್ಟದ ಐಡಿಯಾವನ್ನೇ ಹೇರಿ ಹೋಗುತ್ತಾನೆ. ಮನಸ್ಸಿಲ್ಲದಿದ್ದರೂ ನೀವು ಅದನ್ನೇ ಮಾಡಬೇಕು.ಸಾಮಾನ್ಯವಾಗಿ, ಯಾವ ಕಚೇರಿಯಲ್ಲೂ ಹೊಸ ವಿಚಾರಗಳನ್ನು ಸ್ವಾಗತಿಸುವುದಿಲ್ಲ. ನೀವು ಬಾಸ್‌ಗಿಂತ ಜಾಣರಾಗಿದ್ದರೆ ದಯವಿಟ್ಟು ಅದನ್ನು ತೋರಿಸಿಕೊಳ್ಳಬೇಡಿ. ಬಾಸ್‌ ತಪ್ಪು ಮಾಡಿದ್ದರೆ, ಮಾಡುತ್ತಿದ್ದರೆ ಯಾವ ಕಾರಣಕ್ಕೂ ಬಾಯಿ ಬಿಡಬೇಡಿ. ಅದರಿಂದ ನಿಮಗೆ ಕಷ್ಟ ಕಟ್ಟಿಟ್ಟ ಬುತ್ತಿ.

ಇಂಥ ಹಲವಾರು ಘಟನೆಗಳನ್ನು ಇನ್ನು ಮುಂದೆ ವಿವರವಾಗಿ ಬರೆಯುತ್ತ ಹೋಗುತ್ತೇನೆ. ಅದಕ್ಕೂ ಮುನ್ನ ಒಂದು ಸಲಹೆ: ಸಾಧ್ಯವಾದರೆ 'ಒನ್‌ ನೈಟ್‌ ಎಟ್‌ ಕಾಲ್‌ ಸೆಂಟರ್‌’ ಎಂಬ ಪುಸ್ತಕ ಸಿಕ್ಕರೆ ಓದಿ. ಇಂಥ ಕಚೇರಿ, ಅಂಥ ಬಾಸ್‌ಗಳ ಬಗ್ಗೆ ಉತ್ತಮ ವಿವರಣೆ ಇದೆ ಅದರಲ್ಲಿ.

- ಚಾಮರಾಜ ಸವಡಿ

Tuesday, March 11, 2008

ಅಸೂಯೆ ಎಂಬ ತಡೆಗೋಡೆ...

ಇತ್ತೀಚೆಗೆ ಪುಸ್ತಕವೊಂದನ್ನು ಓದುತ್ತಿದ್ದಾಗ, ಸುಮಾರು ಹತ್ತು ವರ್ಷಗಳ ಹಿಂದೆ ಅನಾಮಿಕ ಸಾಧುವೊಬ್ಬ ಹೇಳಿದ ಮಾತು ನೆನಪಾಯ್ತು.

’ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಅಪಾರ ಶಕ್ತಿ ಇರುತ್ತದೆ. ವಿಶಿಷ್ಟ ಪ್ರತಿಭೆ ಇರುತ್ತದೆ. ತನ್ನ ಸುತ್ತಮುತ್ತಲಿನ ಸಂದರ್ಭಗಳನ್ನು ಬಳಸಿಕೊಂಡು ಬೆಳೆಯುವಂತಹ ಅವಕಾಶಗಳು ಎಲ್ಲರಿಗೂ ಇದ್ದೇ ಇರುತ್ತವೆ.

ಆದರೆ, ತುಂಬ ಜನರು ತಮ್ಮಲ್ಲಿ ಅಡಗಿರುವ ಸಾಮರ್ಥ್ಯದ ಬಗ್ಗೆ ಯೋಚಿಸುವುದೇ ಇಲ್ಲ. ತಮಗೆ ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಳ್ಳುವುದೇ ಇಲ್ಲ. ಅವರ ಗಮನವೆಲ್ಲ ಇನ್ನೊಬ್ಬರ ಪ್ರಯತ್ನ, ಸಾಧನೆಯತ್ತಲೇ ಇರುತ್ತದೆ. ಆದರೆ, ಅದನ್ನು ಮೆಚ್ಚುಗೆಯ, ಪ್ರೇರಣೆಯ ಕಣ್ಣುಗಳಿಂದ ಗಮನಿಸುವುದಿಲ್ಲ. ಬದಲಾಗಿ, ಅಸೂಯೆಯಿಂದ ಇನ್ನೊಬ್ಬರ ಸಾಧನೆಯನ್ನು ನೋಡುತ್ತಾರೆ. ಆ ಸಾಧನೆಯ ವೇಗವನ್ನು, ಪರಿಣಾಮವನ್ನು ತಗ್ಗಿಸುವುದು ಹೇಗೆಂದು ತಲೆ ಕೆಡಿಸಿಕೊಳ್ಳುತ್ತಾರೆ. ತಮ್ಮೆಲ್ಲ ಶ್ರಮ, ಸಾಮರ್ಥ್ಯವನ್ನು ಇನ್ನೊಬ್ಬರ ಪ್ರಗತಿಗೆ ತಡೆ ಒಡ್ಡಲು ಬಳಸುತ್ತಾರೆ.

’ಪರಿಣಾಮ ಏನಾಗುತ್ತದೆ?

’ವ್ಯಕ್ತಿಯೊಬ್ಬನ ಸಹಜ ಸಾಮರ್ಥ್ಯದ ದುರ್ಬಳಕೆಯಾಗುತ್ತದೆ. ಯಾರು ಇನ್ನೊಬ್ಬರ ಪ್ರಗತಿಗೆ ತಡೆ ಒಡ್ಡಲು ಪ್ರಯತ್ನಿಸುತ್ತಿರುತ್ತಾರೋ, ಅವರ ಪ್ರಗತಿ ಸಹಜವಾಗಿ ಕುಂಠಿತವಾಗುತ್ತದೆ. ಅವರ ಎಲ್ಲ ಸಮಯ ಹಾಗೂ ಯೋಚನೆ ಇನ್ನೊಬ್ವ ವ್ಯಕ್ತಿಯ ನಡೆಯನ್ನು ಅವಲಂಬಿಸತೊಡಗುತ್ತದೆ. ಅಸೂಯಾಪರ ವ್ಯಕ್ತಿಯ ಮನಸ್ಸನ್ನು ಇನ್ನೊಬ್ಬ ವ್ಯಕ್ತಿ ತುಂಬಿಕೊಳ್ಳುತ್ತಾನೆ. ನಾಶದ ಉದ್ದೇಶ ಈಡೇರುವತನಕ ಈ ವ್ಯಕ್ತಿ ಬೇರೊಂದು ವಿಷಯದತ್ತ ಗಮನ ಹರಿಸುವುದಿಲ್ಲ. ತನ್ನ ಗುರಿ ಸಾಧಿಸಿದ ನಂತರವೇ ಆತನಿಗೆ ನೆಮ್ಮದಿ.

’ಆದರೆ ಇದರಿಂದ ಅಸೂಯಾಪರನಿಗೆ ಏನು ಸಿಕ್ಕಂತಾಯಿತು? ಕ್ಷುದ್ರ ತೃಪ್ತಿ ಬಿಟ್ಟರೆ ಬೇರೆ ಏನೂ ಇಲ್ಲ. ಬದಲಾಗಿ, ಅವನ ಸಮಯ, ಶಕ್ತಿ ಹಾಗೂ ಸಾಮರ್ಥ್ಯ ವ್ಯರ್ಥ್ಯವಾಗುತ್ತದೆ. ಅವನ ಬುದ್ಧಿಶಕ್ತಿ ಕ್ರಿಯಾತ್ಮಕವಾದುದನ್ನು ಮಾಡಲಾಗದ ಸ್ಥಿತಿ ತಲುಪುತ್ತದೆ. ಕ್ರಮೇಣ ಅಸೂಯಾಭಾವನೆ ಅವನನ್ನು ಎಷ್ಟೊಂದು ಆವರಿಸಿಕೊಳ್ಳುತ್ತದೆಂದರೆ, ಸಹಜ ಸಮಾಧಾನ, ಸಂತೃಪ್ತಿ, ವಿವೇಕವನ್ನು ಕಳೆದುಕೊಂಡು ಆತ ಮಾನಸಿಕ ರೋಗಿಯಾಗುತ್ತಾನೆ.

’ಅಸೂಯೆ ಕೆಟ್ಟದ್ದು. ಅದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಇನ್ನೊಬ್ಬರ ಪ್ರಗತಿಯನ್ನು ತಡೆದೆವು, ಅದಕ್ಕೆ ತೊಂದರೆ ಉಂಟು ಮಾಡಿದೆವು ಎಂಬ ಕ್ಷುದ್ರ ತೃಪ್ತಿ ಬಿಟ್ಟರೆ, ಅಸೂಯಾಪರನಿಗೆ ಏನೂ ದಕ್ಕುವುದಿಲ್ಲ. ಬದಲಾಗಿ ಆತ ತನ್ನದೇ ಮಾರ್ಗವನ್ನು ಕಳೆದುಕೊಂಡು, ಇನ್ನೊಬ್ಬರ ನಡೆಯನ್ನು ಕಾಯುತ್ತ ಇದ್ದಲ್ಲೇ ಇದ್ದುಬಿಡುತ್ತಾನೆ.’ಪುಸ್ತಕ ಓದುತ್ತ ಹೋದಂತೆ ನನಗೆ ಸಾಧು ಹೇಳಿದ ಮಾತುಗಳು ಮತ್ತೆ ನೆನಪಾದವು.

ಒಬ್ಬ ಮನುಷ್ಯ ಇನ್ನೊಬ್ಬನನ್ನು ಕಂಡು ಏಕೆ ಅಸೂಯೆ ಪಡುತ್ತಾನೆ ಎಂಬುದಕ್ಕೆ ಬೇಕಾದಷ್ಟು ಕಾರಣಗಳಿರಬಹುದು. ಆದರೆ, ಅವು ಸಮರ್ಥನೀಯ ಎಂದು ಅನ್ನಿಸುವುದಿಲ್ಲ. ನಿಜವಾದ ಸತ್ವ ಇರುವ ವ್ಯಕ್ತಿ ಹೊಸ ಹೊಸ ಸಾಧನೆಗಳನ್ನು ಮಾಡುತ್ತಲೇ ಹೋಗುತ್ತಾನೆ. ಅಸೂಯಾಪರನೊಬ್ಬನ ಅಡ್ಡಗಾಲು ಆತನನ್ನು ಶಾಶ್ವತವಾಗಿ ಮುಗಿಸಲಾರದು.

ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲೊಂದಿಷ್ಟು ಜನ ಅಸೂಯಿಗಳು ಸಿಕ್ಕೇ ಸಿಗುತ್ತಾರೆ. ಅವರು ನಮ್ಮ ಜತೆಗೇ ಇರುತ್ತಾರೆ. ಒಮ್ಮೊಮ್ಮೆ ನಮ್ಮ ಪರಮಾಪ್ತರಂತೆ ನಟಿಸುತ್ತಿರುತ್ತಾರೆ. ನಮ್ಮ ಒಂದೇ ಒಂದು ತಪ್ಪನ್ನು ಹಿಗ್ಗಿಸಿ ತೋರಿಸಲು, ನಮ್ಮನ್ನು ಅವಮಾನಿಸಲು, ನಮ್ಮ ಅವಕಾಶಗಳನ್ನು ಕಸಿದುಕೊಳ್ಳಲು ಪ್ರತಿ ಕ್ಷಣವೂ ಕಾಯುತ್ತಿರುತ್ತಾರೆ. ಅವರ ನಿತ್ಯದ ಬದುಕು ನಮ್ಮನ್ನು, ನಮ್ಮ ನಡೆಯನ್ನು ಅವಲಂಬಿಸಿರುತ್ತದೆ. ಇವರೊಂಥರಾ ಮಾನಸಿಕ ಅವಲಂಬಿಗಳು. ಮಾನಸಿಕ ರೋಗಿಗಳು.

ಎಷ್ಟೋ ಸಾರಿ ಅವರಿಂದ ನಮಗೆ ತೊಂದರೆಯಾಗುತ್ತದೆ. ಕೆಲವೊಮ್ಮೆ ಅವಮಾನವೂ ಆಗುತ್ತದೆ. ಅವರಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ಮನಸ್ಸು ರೊಚ್ಚಿಗೇಳುತ್ತದೆ. ಆದರೆ, ಒಂದೇ ಒಂದು ನಿಮಿಷ ಯೋಚಿಸಿ ನೋಡಿ! ನಮ್ಮನ್ನು ಕೆಣಕುವ ವ್ಯಕ್ತಿಗೆ, ನಮ್ಮನ್ನು ತನ್ನ ಮಟ್ಟಕ್ಕೆ, ತನ್ನ ಕ್ಷೇತ್ರಕ್ಕೆ ತಂದು ಕದನಕ್ಕಿಳಿಸುವ ಉದ್ದೇಶ ಮಾತ್ರ ಇರುತ್ತದೆ. ನಾವು ರೊಚ್ಚಿಗೆದ್ದರೆ, ಮನಸ್ಸಿನ ಸಮತೋಲನ ಕಳೆದುಕೊಂಡರೆ, ಅಸೂಯಿಯ ಉದ್ದೇಶವನ್ನು ಈಡೇರಿಸಿದಂತೆ.

ಸಾಮಾನ್ಯವಾಗಿ ಇಂಥ ಅಸೂಯಿಗಳು ಬಲು ಬೇಗ ಪತ್ತೆಯಾಗುತ್ತಾರೆ. ಅವರನ್ನು ಗುರುತಿಸಲು ತುಂಬ ಕಷ್ಟಪಡಬೇಕಿಲ್ಲ. ಎಷ್ಟೋ ಸಾರಿ ಅಸೂಯಿಗಳು ನಮಗಿಂತ ಮೇಲಿನ ಹಂತದಲ್ಲಿರುತ್ತಾರೆ. ಆಗ ಕಷ್ಟ ಇನ್ನೂ ಜಾಸ್ತಿ. ನಮ್ಮನ್ನು ಹೀಯಾಳಿಸಿ, ನಮಗೆ ಸಹಜವಾಗಿ ದಕ್ಕಬಹುದಾದ ಅವಕಾಶಗಳನ್ನು ನಿರಾಕರಿಸಿ, ಅಥವಾ ಅವನ್ನು ನಮಗಿಂತ ಕಡಿಮೆ ಬುದ್ಧಿಮತ್ತೆ, ಪ್ರತಿಭೆ ಇರುವವರಿಗೆ ಕೊಡುವ ಮೂಲಕ ಅವರು ವಿಲಕ್ಷಣ ಆನಂದ ಅನುಭವಿಸುತ್ತಾರೆ.

ಆಗೆಲ್ಲ, ನಮ್ಮ ಮನಸ್ಸು ರೊಚ್ಚಿಗೇಳುತ್ತದೆ. ಇದನ್ನು ಖಂಡಿಸಬೇಕು, ಅಸೂಯಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ಹಂಬಲಿಸುತ್ತದೆ. ಆದರೆ, ಹಾಗೆ ಮಾಡಲು ಹೋದರೆ, ಅಸೂಯಿಗೂ ನಮಗೂ ಯಾವ ವ್ಯತ್ಯಾಸವೂ ಇರುವುದಿಲ್ಲ. ಏಕೆಂದರೆ, ಮನಸ್ಸಿನೊಳಗೆ ನಮ್ಮ ಪ್ರಗತಿಗಿಂತ ಇನ್ನೊಬ್ಬನ ವಿನಾಶದ ವಿಚಾರವೇ ತುಂಬಿಕೊಳ್ಳುತ್ತದೆ. ನಮ್ಮ ಗುರಿಯನ್ನು ಮರೆತು, ಇನ್ನೊಬ್ಬರಿಗೆ ಕೆಟ್ಟದು ಮಾಡುವುದು ಹೇಗೆ? ಎಂದು ತಲೆ ಕೆಡಿಸಿಕೊಳ್ಳುತ್ತೇವೆ. ಕ್ರಮೇಣ ನಮ್ಮ ಮನಸ್ಸು ರೋಗಿಯಾಗುತ್ತದೆ.

ಅದರ ಬದಲು, ಸಮಾಧಾನದಿಂದ ಇರಲು ಪ್ರಯತ್ನಿಸೋಣ. ನಮ್ಮ ಅಸಲಿ ಪ್ರತಿಭೆಯನ್ನು ಮತ್ತಷ್ಟು ಸಾಣೆ ಹಿಡಿಯುವುದರಲ್ಲಿ ಸಮಯ ವಿನಿಯೋಗಿಸೋಣ. ಹೊಸ ಹೊಸ ವಿಷಯಗಳನ್ನು ಕಲಿಯಲು ಯತ್ನಿಸೋಣ. ನಮ್ಮ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಕಲಿಯುವ ಮೂಲಕ, ಮಾಡಲು ಯತ್ನಿಸುವ ಮೂಲಕ, ನಿರಾಶೆಯನ್ನು ಅವಕಾಶವನ್ನಾಗಿ ಬದಲಾಯಿಸಿಕೊಳ್ಳೋಣ. ನಮ್ಮ ಭಾವನೆಗಳ ಮೇಲಿನ ಹಿಡಿತ ಬಲಗೊಳ್ಳುತ್ತ ಹೋದಂತೆ, ಹೊಸ ಆತ್ಮವಿಶ್ವಾಸ ಬೆಳೆಯುತ್ತ ಹೋಗುತ್ತದೆ. ಅಸೂಯಿಗಳ ಸಣ್ಣತನ ಕಂಡು ನಗುವ, ಅವರ ಅಡ್ಡಗಾಲನ್ನು ಅವಕಾಶವಾಗಿ ಬದಲಾಯಿಸಿಕೊಳ್ಳುವ ಸಾಮರ್ಥ್ಯ ನಮ್ಮದಾಗುತ್ತದೆ.

ತುಂಬ ಜನ, ತಾವು ಅಸೂಯಿಗಳಲ್ಲ ಎಂದೇ ಅಂದುಕೊಳ್ಳುತ್ತಾರೆ. ನನಗೆ ಸವಾಲಾಗಬಲ್ಲ ವ್ಯಕ್ತಿಯ ಸಾಮರ್ಥ್ಯವನ್ನು ಕುಂದಿಸಲು ಯತ್ನಿಸುತ್ತಿದ್ದೇನೆ ಎಂದಷ್ಟೇ ಭಾವಿಸುತ್ತಾರೆ. ಆದರೆ, ಎಲ್ಲಿಯವರೆಗೆ ನಮ್ಮಿಂದ ಕ್ರಿಯಾಶೀಲತೆ ಸಾಧ್ಯವಾಗುವುದಿಲ್ಲವೋ, ಹೊಸದನ್ನು ಕಲಿಯಲು ಕಷ್ಟವಾಗುತ್ತದೋ, ಇನ್ನೊಬ್ಬರ ಬಗ್ಗೆ ಹೆಚ್ಚು ಯೋಚಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ಅಸೂಯೆಯ ಒಂದಂಶ ನಮ್ಮಲ್ಲೂ ಇದೆ ಎಂದೇ ಅರ್ಥ. ಅದನ್ನು ದೂರ ಮಾಡಿದರೆ ಮಾತ್ರ ನಾವು ಕ್ರಿಯಾಶೀಲರಾಗುತ್ತೇವೆ. ಇಲ್ಲದಿದ್ದರೆ ಯಾವುದೋ ಒಂದು ಅನುಪಯುಕ್ತ ಸಿದ್ಧಾಂತಕ್ಕೆ ಕಟ್ಟುಬಿದ್ದು, ಅದರಲ್ಲಿಯೇ ಮುಳುಗೇಳುತ್ತ, ನಮ್ಮದೇ ಒಂದು ಸೀಮಿತ ವಲಯವನ್ನು ಕಟ್ಟಿಕೊಂಡು, ಅದರಲ್ಲಿಯೇ ಈಜಾಡುತ್ತ ಇದ್ದು ಬಿಡುತ್ತೇವೆ. ನಮ್ಮ ವಲಯದಾಚೆಗೂ ಜಗತ್ತಿದೆ ಎಂಬುದನ್ನೇ ಮರೆತು ಬಾವಿ ಕಪ್ಪೆಗಳಾಗುತ್ತೇವೆ. ವ್ಯಕ್ತಿಗಳು, ಸಿದ್ಧಾಂತಗಳು, ಪಕ್ಷಗಳು, ಜಾತಿಗಳು, ಧರ್ಮಗಳ ನಡುವೆ ಗೋಡೆ ಎದ್ದಿರುವುದೇ ಈ ಕಾರಣಕ್ಕೆ.

ಹಾಗಂತ ಆ ಸಾಧು ಹೇಳಿದ್ದ. ಇವತ್ತಿನ ಕ್ಷಣದವರೆಗೂ, ಒಂದೇ ಒಂದು ಸಾರಿಯೂ, ಅದು ಸುಳ್ಳು ಎಂದು ನನಗೆ ಅನ್ನಿಸಿಲ್ಲ!

- ಚಾಮರಾಜ ಸವಡಿ